ಗ್ರೆಗೊರಿ, ಜೇಮ್ಸ್

1638--1675. ಸ್ಕಾಟ್ಲೆಂಡಿನ ಖ್ಯಾತ ಗಣಿತಜ್ಞ ಮತ್ತು ಖಗೋಳ ಶಾಸ್ತ್ರಜ್ಞ. ಈತನ ಹೆಸರಿನಿಂದಲೇ ಕರೆಯಲ್ಪಡುವ ಪ್ರತಿಫಲನ ದೂರದರ್ಶಕವನ್ನು ಉಪಜ್ಞಿಸಿದ ಖ್ಯಾತಿ ಇವನದು. ಪ್ರತಿಫಲನ ದೂರದರ್ಶಕಗಳನ್ನು ಕುರಿತ ವಿವರಣೆ ಇವನ ಮಹಾಪ್ರಬಂಧ `ಆಷ್ಟಿಕ ಪ್ರೊಮೋಟ ಎಂಬುದರಲ್ಲಿ ಇದೆ (1663). ಸುಮಾರು 1665ರ ಹೊತ್ತಿಗೆ ಈತ ಇಟಲಿಯ ಪಾಡ್ಯುಯ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಕೆಲಕಾಲ ವ್ಯಾಸಂಗ ನಡೆಸಿದ. ವೃತ್ತ ಮತ್ತು ಅತಿಪರವಲಯಗಳ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಅನಂತ ಅಭಿಸರಣ ಶ್ರೇಣಿಗಳನ್ನು ಕುರಿತು ಈತ ಚರ್ಚಿಸಿದ `ವೀರ ಸಕ್ರ್ಯುಲಿ ಎಟ್ ಹೈಪರ್‍ಬೊಲೆ ಕ್ವಾಡ್ರೇಚುರಾ ಎಂಬ ಬರೆಹ 1667ರಲ್ಲಿ ಪ್ರಕಟವಾಯಿತು. ವಕ್ರರೇಖೆಗಳ ಚಾಪಕಲನಕ್ಕೆ (ರೆಕ್ಟಿಫಿಕೇಷನ್), ಆವರ್ತನ ಘನಾಕೃತಿಗಳ ಕ್ಷೇತ್ರಮಿತಿಗೆ (ಮೆನ್ಸುರೇಷನ್) ಸಂಬಂಧಿಸಿದಂತೆ `ಜಿಲೋಮೆಟ್ರಿಯೇ ಪಾರ್ಸ್ ಯೂನಿವರ್ಸಾಲೀಸ್ ಎಂಬ ಕೃತಿಯನ್ನು 1668ರಲ್ಲಿ ಪ್ರಕಟಪಡಿಸಿದ. ಇವನ ಪ್ರಾಧ್ಯಾಪಕತ್ವದ ಸೇವೆ ಸೇಂಟ್ ಆಂಡ್ರೂಸ್ಯ್ (1669-74) ಮತ್ತು ಎಡಿನ್ ಬರಾ ವಿಶ್ವವಿದ್ಯಾಲಯಗಳಿಗೆ (1674-75) ಲಭಿಸಿತು. ಆಭಿಸರಣ ಮತ್ತು ಅಪಸರಣ ಶ್ರೇಣಿಗಳನ್ನು ಕುರಿತು ಚರ್ಚಿಸಿದವರಲ್ಲಿ ಪ್ರಾಯಶ: ಈತ ಮೊದಲಿಗನೆನ್ನಬಹುದು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ